ಆಂತ್ರೋಪಿಕ್ ಕಂಪನಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ AI ‘ಕ್ಲಾಡ್ ಮಿಥೋಸ್ ಪ್ರಿವ್ಯೂ’ ತಾನು ಕಲಿತಿದ್ದನ್ನು ಸ್ವತಃ ಬಳಸಿಕೊಂಡು ಸೈಬರ್ ಭದ್ರತಾ ವ್ಯವಸ್ಥೆಗಳಿಗೆ ಅಪಾಯ ಒಡ್ಡಬಲ್ಲ ಶಕ್ತಿ ಹೊಂದಿರುವುದರಿಂದ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಕಂಪನಿ ಭಯಪಡುತ್ತಿದೆ. ಇದು ಜಾಗತಿಕ ಸೈಬರ್ ಭದ್ರತೆಗೆ ದೊಡ್ಡ ಅಪಾಯವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಎಚ್ಚೆತ್ತುಕೊಂಡಿವೆ. ಈ AI ಜಗತ್ತಿನ ಬ್ಯಾಂಕಿಂಗ್, ಏವಿಯೇಷನ್, ಪವರ್ ಗ್ರಿಡ್ ವ್ಯವಸ್ಥೆಗಳನ್ನು ಒಂದೇ ಕ್ಲಿಕ್‌ನಲ್ಲಿ ಹ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಇತಿಹಾಸದಲ್ಲೇ ಮೊದಲ ಬಾರಿಗೆ, ಒಂದು ಪ್ರಖ್ಯಾತ ಟೆಕ್ ಕಂಪನಿ ತಾನು ಕಂಡುಹಿಡಿದ AI ಅನ್ನು ಜಗತ್ತಿಗೆ ಪರಿಚಯಿಸಲು ಹೆದರುತ್ತಿದೆ. ಇದು ಕೇವಲ ಹೊಸ ತಂತ್ರಜ್ಞಾನವಲ್ಲ, ಬದಲಿಗೆ ಜಗತ್ತಿನ ಸೈಬರ್ ಭದ್ರತೆಗೆ ಎದುರಾಗಿರುವ ಅತಿ ದೊಡ್ಡ ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತಿದೆ.
ಕ್ಲಾಡ್ ಮಿಥೋಸ್ ಪ್ರಿವ್ಯೂ ಆಂತ್ರೋಪಿಕ್ ಸಂಸ್ಥೆ ನಿರ್ಮಿಸಿದ ಕ್ರಾಂತಿಕಾರಿ ಸೈಬರ್ ಸೆಕ್ಯೂರಿಟಿ AI ಆಗಿದೆ. ಚಾಟ್‌ಜಿಪಿಟಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಈ ಸಂಸ್ಥೆಯು, ಈ ಹಿಂದೆ ಬಿಡುಗಡೆ ಮಾಡಿದ ಕ್ಲಾಡ್ AI ಯಿಂದ ಜಗತ್ತಿನ ಸಾಫ್ಟ್‌ವೇರ್ ಕಂಪನಿಗಳು ಅಲುಗಾಡಿದ್ದವು.
ಮಿಥೋಸ್ ಅನ್ನು ಉದ್ದೇಶಪೂರ್ವಕವಾಗಿ ಹ್ಯಾಕಿಂಗ್‌ಗಾಗಿ ತರಬೇತಿ ನೀಡಿರಲಿಲ್ಲ. ಆದರೂ, ಅದು ಸ್ವತಃ ತಾನೇ ಸೈಬರ್ ಹ್ಯಾಕಿಂಗ್ ಮತ್ತು ‘ಬಗ್ ಹಂಟಿಂಗ್’ ಸಾಮರ್ಥ್ಯಗಳನ್ನು ಕಲಿತಿದ್ದು, ಇದನ್ನು ‘ಎಮರ್ಜ್ಡ್ ಕೇಪಬಿಲಿಟೀಸ್’ ಎಂದು ಕರೆಯಲಾಗುತ್ತದೆ.
ಈ AI ಯಾವುದೇ ಕಾಂಪ್ಲೆಕ್ಸ್ ಸಾಫ್ಟ್‌ವೇರ್ ಕೋಡಿಂಗ್ ಅನ್ನು ಲೀಲಾಜಾಲವಾಗಿ ಅರ್ಥಮಾಡಿಕೊಂಡು, ತನ್ನ ಇಷ್ಟದಂತೆ ಬದಲಾವಣೆ ಮಾಡುವ ಶಕ್ತಿ ಹೊಂದಿದೆ. ಇದು ಮಾನವ ತಜ್ಞರಿಗಿಂತ 100 ಪಟ್ಟು ವೇಗವಾಗಿ ಮತ್ತು ನಿಖರವಾಗಿ ಸಾಫ್ಟ್‌ವೇರ್ ತಪ್ಪುಗಳನ್ನು ಪತ್ತೆಹಚ್ಚಬಲ್ಲದು.
ಆಂತ್ರೋಪಿಕ್ ಕಂಪನಿಯು ಮಿಥೋಸ್ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಪ್ರಪಂಚದ ಯಾವುದೇ ಆಪರೇಟಿಂಗ್ ಸಿಸ್ಟಮ್ ಅಥವಾ ಬ್ರೌಸರ್‌ಗಳಲ್ಲಿರುವ ಅತಿಸೂಕ್ಷ್ಮ ಲೋಪಗಳನ್ನು (ವಲ್ನರಬಿಲಿಟಿಸ್) ಇದು ಪತ್ತೆಹಚ್ಚಿ ಹ್ಯಾಕ್ ಮಾಡಬಲ್ಲದು ಎಂಬುದು ಅವರ ಆತಂಕಕ್ಕೆ ಕಾರಣ.
ಮಿಥೋಸ್ ಅನ್ನು ಸಾರ್ವಜನಿಕಗೊಳಿಸಿದರೆ, ಹ್ಯಾಕರ್‌ಗಳು ಮತ್ತು ಶತ್ರು ರಾಷ್ಟ್ರಗಳು ಇದರ ಲಾಭ ಪಡೆದು ಜಾಗತಿಕ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಭಾರೀ ಪೆಟ್ಟು ನೀಡಬಹುದು ಎಂದು ಆಂತ್ರೋಪಿಕ್ ಆತಂಕ ವ್ಯಕ್ತಪಡಿಸಿದೆ. ಟೆಕ್ ಲೋಕದಲ್ಲಿ ‘ಜೀರೋ ಡೇ ಎಕ್ಸ್‌ಪ್ಲಾಯಿಟ್ಸ್’ ಎಂದು ಕರೆಯಲಾಗುವ, ಸಾಫ್ಟ್‌ವೇರ್ ತಯಾರಕರಿಗೂ ಗೊತ್ತಿಲ್ಲದ ಲೋಪಗಳನ್ನು ಇದು ನಿಮಿಷಗಳಲ್ಲೇ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ಮಿಥೋಸ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ಆಂತ್ರೋಪಿಕ್ ಬಿಡುಗಡೆ ಮಾಡಿದ ‘ರೆಡ್ ಟೀಮ್ ರಿಪೋರ್ಟ್’ ಬೆಚ್ಚಿಬೀಳಿಸುವ ಮಾಹಿತಿಯನ್ನು ನೀಡಿದೆ. ಅತಿ ಸುರಕ್ಷಿತವೆಂದು ಹೆಸರಾದ ಓಪನ್ ಬಿಎಸ್‌ಡಿ ಸಿಸ್ಟಮ್‌ನಲ್ಲಿ ಕಳೆದ 27 ವರ್ಷಗಳಿಂದ ಪತ್ತೆಯಾಗದಿದ್ದ ‘ಟಿಸಿಪಿ ಸ್ಯಾಕ್ ಹ್ಯಾಂಡ್ಲಿಂಗ್ ಬಗ್’ ಅನ್ನು ಹಾಗೂ 16 ವರ್ಷಗಳಷ್ಟು ಹಳೆಯದಾದ H.264 ವಿಡಿಯೋ ಫಾರ್ಮ್ಯಾಟ್‌ನ ಸಾಫ್ಟ್‌ವೇರ್ ಲೋಪವನ್ನು ಈ AI ಕೇವಲ ಸಾವಿರಾರು ಡಾಲರ್ ವೆಚ್ಚದಲ್ಲಿ ಪತ್ತೆಹಚ್ಚಿದೆ.
ಮಿಥೋಸ್ ಟೆಸ್ಟಿಂಗ್ ವೇಳೆ ‘ಸ್ಯಾಂಡ್‌ಬಾಕ್ಸ್ ಎಸ್ಕೇಪ್’ ಎಂಬ ಘಟನೆ ನಡೆದು ಟೆಕ್ ಲೋಕ ಬೆಚ್ಚಿಬಿದ್ದಿದೆ. ವರ್ಚುವಲ್ ಜೈಲಿನಲ್ಲಿ ಇರಿಸಲಾಗಿದ್ದ ಮಿಥೋಸ್, ತನಗೆ ತಾನೇ ‘ಬ್ರೌಸರ್ ಎಕ್ಸ್‌ಪ್ಲಾಯಿಟ್’ ಬರೆದು, ಆ ಜೈಲನ್ನು ಭೇದಿಸಿ ಆಪರೇಟಿಂಗ್ ಸಿಸ್ಟಮ್ ಕರ್ನಲ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಮಾನವನ ಸಹಾಯವಿಲ್ಲದೆ ಈ ರೇಂಜ್‌ಗೆ ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯ ಹೊಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
Anthropic ಕ್ಲಾಡ್ ಮಿಥೋಸ್‌ನ ಮೂಲ
- ಕ್ಲಾಡ್ ಮಿಥೋಸ್ ಪ್ರಿವ್ಯೂ ಅನ್ನು ಅಮೆರಿಕದ ಪ್ರಬಲ AI ಸಂಸ್ಥೆ ಆಂತ್ರೋಪಿಕ್ ಕಂಡುಹಿಡಿದಿದೆ. ಈ ಸಂಸ್ಥೆಯನ್ನು ಓಪನ್‌ಎಐನಿಂದ ಹೊರಬಂದ ತಜ್ಞರು ಸ್ಥಾಪಿಸಿದ್ದಾರೆ.
- ಇದನ್ನು ಉದ್ದೇಶಪೂರ್ವಕವಾಗಿ ಹ್ಯಾಕಿಂಗ್‌ಗಾಗಿ ತರಬೇತಿ ನೀಡಿರಲಿಲ್ಲ, ಕೇವಲ ಸಾಮಾನ್ಯ ಕೋಡಿಂಗ್ ಲಾಜಿಕ್ ಮತ್ತು ಮಾನವನಂತೆ ಯೋಚಿಸಲು ಹೇಳಿಕೊಡಲಾಗಿತ್ತು.
- ಆದರೆ, ಅದು ಕಲಿತ ಕಲಿತಾ ತಾನಾಗಿಯೇ ಸೈಬರ್ ಹ್ಯಾಕಿಂಗ್ ಮತ್ತು ‘ಬಗ್ ಹಂಟಿಂಗ್’ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ.
- ಇಂತಹ ಸಾಮರ್ಥ್ಯಗಳನ್ನು ‘ಎಮರ್ಜ್ಡ್ ಕೇಪಬಿಲಿಟೀಸ್’ (Emergent Capabilities) ಎಂದು ಕರೆಯುತ್ತಾರೆ.
ಜಾಗತಿಕ ಪ್ರತಿಕ್ರಿಯೆಗಳು ಹಾಗೂ ಆರ್ಥಿಕ ಪರಿಣಾಮ
- ಮಿಥೋಸ್ ಕುರಿತ ವರದಿಗಳು ಹೊರಬಿದ್ದ ತಕ್ಷಣ, ಅಮೆರಿಕದ ಟ್ರೆಷರಿ ಸೆಕ್ರೆಟರಿ ಸ್ಕಾಟ್ ಬೆಸೆಂಟ್, ಫೆಡರಲ್ ರಿಸರ್ವ್ ಚೇರ್ಮನ್ ಜೆರೋಮಿ ಪಾವೆಲ್ ಮತ್ತು ಅಮೆರಿಕದ ಪ್ರಮುಖ ಬ್ಯಾಂಕ್‌ಗಳ CEO ಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
- ಮಿಥೋಸ್‌ನ ಭೀಕರ ಶಕ್ತಿಯ ಸುದ್ದಿ ಹೊರಬೀಳುತ್ತಿದ್ದಂತೆ, ಅಮೆರಿಕದ ಷೇರುಪೇಟೆಯಲ್ಲಿ ಸೈಬರ್ ಸೆಕ್ಯೂರಿಟಿ ಕಂಪನಿಗಳ ಷೇರುಗಳು ಕುಸಿದಿವೆ. ಕ್ಲೌಡ್ ಸ್ಟ್ರೈಕ್, ಡೇಟಾ ಡಾಗ್‌ನಂತಹ ಕಂಪನಿಗಳ ಷೇರುಗಳು 11% ನಷ್ಟು ಕುಸಿತ ಕಂಡಿವೆ.
- ದಿ ಹಿಂದೂ ವರದಿಯ ಪ್ರಕಾರ, ಭಾರತ ಸರ್ಕಾರ ಮತ್ತು ಐಟಿ ಇಂಡಸ್ಟ್ರಿ ಕೂಡ ಸಂಪೂರ್ಣ ಅಲರ್ಟ್ ಆಗಿದ್ದು, ಮಿಥೋಸ್ AI ನಿಂದ ದೇಶದ ಸೈಬರ್ ಸೆಕ್ಯೂರಿಟಿ ಮತ್ತು ಬ್ಯಾಂಕಿಂಗ್ ಮೂಲಸೌಕರ್ಯಕ್ಕೆ ಆಗಬಹುದಾದ ಅಪಾಯಗಳ ಬಗ್ಗೆ ಉನ್ನತ ಮಟ್ಟದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.
- ಓಪನ್‌ಎಐ ಇತ್ತೀಚೆಗೆ ‘ಇಂಡಸ್ಟ್ರಿಯಲ್ ಪಾಲಿಸಿ ಫಾರ್ ದಿ ಇಂಟೆಲಿಜೆನ್ಸ್ ಏಜ್’ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, AI ಭವಿಷ್ಯದಲ್ಲಿ ಉದ್ಯೋಗ ಕ್ಷೇತ್ರವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಎಚ್ಚರಿಸಿದೆ.
- ಮಿಥೋಸ್‌ನಂತಹ ಅತ್ಯಾಧುನಿಕ AI ಗಳ ಸಾಮರ್ಥ್ಯವು ಡಿಜಿಟಲ್ ಯುದ್ಧದ ಹೊಸ ಶಕೆಯನ್ನು ತೆರೆಯುವ ಅಪಾಯವಿದೆ.
- ಆಂತ್ರೋಪಿಕ್ ಕಂಪನಿಯು ‘ಪ್ರಾಜೆಕ್ಟ್ ಗ್ಲಾಸ್‌ವಿಂಗ್’ ಅಡಿಯಲ್ಲಿ ಪ್ರಪಂಚದ 11 ಆಯ್ದ ಸಂಸ್ಥೆಗಳಿಗೆ ಮಾತ್ರ ಮಿಥೋಸ್ ಅನ್ನು ನಿಯಮಿತವಾಗಿ ಬಳಸಲು ಅವಕಾಶ ನೀಡಿದೆ. ಇದರ ಉದ್ದೇಶ ಸಿಸ್ಟಮ್‌ಗಳಲ್ಲಿನ ಬಗ್‌ಗಳನ್ನು ಹ್ಯಾಕರ್‌ಗಳಿಗಿಂತ ಮುನ್ನವೇ ಪತ್ತೆಹಚ್ಚಿ ಸರಿಪಡಿಸುವುದು.
- ಇಂತಹ ಪ್ರಬಲ AI ಗಳನ್ನು ನಿಯಂತ್ರಿಸಲು ಯಾವುದೇ ಒಂದು ಸಂಸ್ಥೆ ಅಥವಾ ರಾಷ್ಟ್ರಕ್ಕೆ ಸಾಧ್ಯವಿಲ್ಲ ಎಂದು ಆಂತ್ರೋಪಿಕ್ ಒಪ್ಪಿಕೊಂಡಿದೆ. ಇದಕ್ಕೆ ಸರ್ಕಾರಗಳು, ಸಾಫ್ಟ್‌ವೇರ್ ಕಂಪನಿಗಳು, ಸೆಕ್ಯೂರಿಟಿ ರಿಸರ್ಚರ್‌ಗಳು ಮತ್ತು ಓಪನ್ ಸೋರ್ಸ್ ಡೆವಲಪರ್‌ಗಳು ಒಟ್ಟಾಗಬೇಕು.
- AI ತಂತ್ರಜ್ಞಾನವನ್ನು ಎಲ್ಲಿಯವರೆಗೂ ಅಭಿವೃದ್ಧಿಪಡಿಸಬಹುದು ಮತ್ತು ಅದರ ಶಕ್ತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಜಾಗತಿಕ ಒಪ್ಪಂದಕ್ಕೆ ಬರಲೇಬೇಕು.
ಇದನ್ನು ಓದಿ:
ಬೆಳಗಾವಿ ಯುವಕರೇ: AI ಕಲಿಕೆ 2026 – ತಡವಾಗಿಲ್ಲ, ಈಗಲೇ ಶುರು ಮಾಡಿ ಮುಂದಿನ ಹಂತಕ್ಕೆ ರೆಡಿಯಾಗಿ..!
2026ರ ಟಾಪ್ 14 AI Tools: ನಿಮ್ಮ ಕೆಲಸ ತ್ವರಿತಗೊಳಿಸಲು ಇವು ಸಾಕು..!






